ಸುತ್ತುಗಟ್ಟುವುದು ಎಂಬುದು ಘೇರಾವೊ ಪದದ ಅರ್ಥ. ಅನೇಕ ಕಾರ್ಮಿಕರು ಗುಂಪುಗೂಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಡಬಹುದಾದ ಮಾಲೀಕರನ್ನು ಅಥವಾ ಆಡಳಿತ ಅಥವಾ ವ್ಯವಸ್ಥಾಪಕ ವರ್ಗಕ್ಕೆ ಸೇರಿದವರನ್ನು ಅಂಥ ಸ್ಥಳದಿಂದ ಯಾವೊಂದು ಸ್ಥಳ, ಕೊಠಡಿ, ಕಚೇರಿ ಅಥವಾ ಹೊರಗೆ ಬಾರದಂತೆ ತಡೆಯುವುದು. ಮಾಲೀಕರನ್ನೋ ಅಧಿಕಾರಿಗಳನ್ನೋ ಮಾಲೀಕರ ಕಾರಭಾರಿಗಳನ್ನೋ ಸುತ್ತುಗಟ್ಟಿ ಬಾಹ್ಯಸಂಪರ್ಕವನ್ನು ತಪ್ಪಿಸಿ, ಅವರ ಜೀವನವನ್ನು ದುಸ್ತರಗೊಳಿಸಿ, ಭಯಭೀತಿಗಳು ಅವರ ಮೇಲೆ ಪ್ರಭಾವ ಬೀರುವ ಹಾಗೆ ಮಾಡಿ ಅವರು ಕಾರ್ಮಿಕರ ಬೇಡಿಕೆಗಳನ್ನು ಒಪ್ಪುವಂತೆ ಮಾಡುವುದು ಇದರ ಉದ್ದೇಶವಾಗಿರುತ್ತದೆ. ಈ ಅರ್ಥದಲ್ಲಿ ಘೇರಾವೊ ಪದದ ಬಳಕೆ ಇತ್ತೀಚಿನದಾದರೂ ಈ ವಿಧಾನ ಬಹಳ ಕಾಲದಿಂದಲೂ ಬಳಕೆಯಲ್ಲಿದೆಯೆಂಬುದು 1959ರಲ್ಲಿ ಎಸ್.ಎ. ಡಾಂಗೆ ವ್ಯಕ್ತಪಡಿಸಿದ ಅಭಿಪ್ರಾಯ. 1967ರಿಂದ ಘೇರಾವ್ ತೀವ್ರವಾಗಿದೆ. ಘೇರಾವ್ ವೈಶಿಷ್ಟ್ಯವೇನೆಂದರೆ ಅದು ಗಂಟೆಗಟ್ಟಲೆ ಮುಂದುವರಿಯುವುದು. ಈ ಅವಧಿಯಲ್ಲಿ ಕಾರ್ಯನಿರ್ವಾಹಕ ಮಂಡಲದ ಅಧಿಕಾರಿಗಳು ಊಟ ತಿಂಡಿ ತೆಗೆದುಕೊಳ್ಳುವುದಿರಲಿ, ದೇಹಬಾಧೆ ತೀರಿಸಿಕೊಳ್ಳುವುದೂ ಅವರಿಗೆ ಇಲ್ಲವಾಗುತ್ತದೆ. ಹಲವೊಮ್ಮೆ ಅಧಿಕಾರಿಗಳು ಚಿತ್ರಹಿಂಸೆಗೂ ಗುರಿಯಾದದ್ದುಂಟು. ಕಾರ್ಮಿಕರ ಆಂದೋಲನದ ಒಂದು ಸ್ವರೂಪವಾಗಿ ಘೇರಾವ್ ಜನ್ಮತಾಳಿರುವುದಾದರೂ ಸಮಾಜದ ಇತರ ವರ್ಗಗಳು, ಅದರಲ್ಲೂ ವಿದ್ಯಾರ್ಥಿಗಳು, ಅನೇಕ ಘೇರಾವುಗಳನ್ನು ಮಾಡಿದ್ದಾರೆ.

ಘೇರಾವು ನ್ಯಾಯಬಾಹಿರವಷ್ಟೇ ಅಲ್ಲ, ಅಪರಾಧದ ಸ್ವರೂಪವನ್ನು ತಾಳುತ್ತದೆ. ಘೇರಾವಿನ ಮೊದಲ ಹಂತ ಅದರ ಆರಂಭ ; ಎರಡನೆಯ ಹಂತ ಅದರ ಮುಂದುವರಿಕೆ. ಮೊದಲ ಹಂತ ಅಪರಾಧವಾಗದು. ಆದರೆ ಅದರ ಎರಡನೆಯ ಹಂತದಲ್ಲಿ ಭಾರತದ ದಂಡಸಂಹಿತೆಯಲ್ಲಿ ನಮೂದಿಸಲಾದ ಕೆಲವು ಅಪರಾಧಗಳ ಲಕ್ಷಣಗಳು ಕಾಣಬರುತ್ತವೆ. ಹೀಗೆ ಘೇರಾವೊ ಅಪರಾಧದಲ್ಲಿ ಪರ್ಯವಸಾನವಾಗುತ್ತದೆ.

ಘೇರಾವ್ ಮಾಡಲು ತೊಡಗಿದ ಕಾರ್ಮಿಕರು ಶಾಂತವಾಗಿರಬಹುದು, ಇಲ್ಲವೆ ಘೋಷಣೆಗಳನ್ನು ಕೂಗುತ್ತಿರಬಹುದು. ಅನೇಕ ಸಲ ಇದು ಹಿಂಸಾರೂಪ ತಾಳಿರುವುದೂ ಉಂಟು. ಘೇರಾವ್ಗಳ ಅವಧಿ ಇಷ್ಟೇ ಎಂದು ಹೇಳಲು ಬರುವುದಿಲ್ಲ. ಘೇರಾವ್ಅನ್ನು ಅಪರಾಧವೆಂದು ಪರಿಗಣಿಸುವುದಕ್ಕೆ ಅದರ ಅವಧಿ ಅಥವಾ ಅದು ಹಿಂಸಾರೂಪ ತಾಳುವುದು ಕಾರಣವಲ್ಲ. ಘೇರಾವ್ ಹಿಂಸಾರೂಪ ತಾಳದಿದ್ದರೂ ಅದು ಅಪರಾಧವಾಗುತ್ತದೆ. ಪ್ರತಿಬಂಧಿಸುವುದು, ಅವರೋಧಿಸುವುದು ಇದರ ಮುಖ್ಯಲಕ್ಷಣಗಳಾಗಿರುವುದರಿಂದ ಇದು ಅಪರಾಧವಾಗುತ್ತದೆ. ಇದು, ಇತರ ಅಪರಾಧಿಕ ಸನ್ನಿವೇಶಗಳನ್ನೊಳಗೊಂಡಾಗ, ವಿವಿಧ ಅಪರಾಧಗಳಿಗೆ ಹೊಣೆಯಾಗುತ್ತದೆ.
ಶಾಂತ ಸ್ವರೂಪದ ಸಂಪು ಕಾರ್ಮಿಕರ ನ್ಯಾಯಿಕಹಕ್ಕು ಎಂಬುದನ್ನು ವಿಶ್ವದ ಅನೇಕ ರಾಷ್ಟ್ರಗಳು ಒಪ್ಪಿವೆ. ಭಾರತದ 1947ರ ಕಾರ್ಮಿಕರ ವಿವಾದಗಳ ಸಂಬಂಧದ ಕಾನೂನು ಇದನ್ನು ದೃಢೀಕರಿಸುತ್ತದೆ. ಆದರೆ ಈ ರೀತಿಯ ಸಂಪು ಮತ್ತು ಮುಷ್ಕರಗಳಿಗೂ ಘೇರಾವ್ಗಳಿಗೂ ವ್ಯತ್ಯಾಸವಿದೆ. ಘೇರಾವ್ನ ಸ್ವರೂಪ ಮತ್ತು ಸಿದ್ಧಾಂತಗಳನ್ನು ಕುರಿತು ಅನೇಕರು ವಿವೇಚಿಸಿದ್ದಾರೆ. ಇದು ವ್ಯವಸ್ಥಾಪಕರ ಮೇಲೆ ಹೇರಲಾಗುವ ಆರ್ಥಿಕ ದಬ್ಬಾಳಿಕೆ, ಕಾರ್ಮಿಕರ ಪ್ರದರ್ಶನ, ಮುಷ್ಕರ ಮತ್ತು ಸತ್ಯಾಗ್ರಹಗಳ ಹತ್ತಿರದ ಸಂಬಂಧಿ ಎಂದು ಮುಂತಾಗಿ ಅಭಿಪ್ರಾಯಗಳಿವೆ. ಶಾಂತ ಪ್ರದರ್ಶನ ಭಾರತೀಯರ ಮೂಲಭೂತ ಹಕ್ಕು ಎಂದು ಇಲ್ಲಿಯ ಶ್ರೇಷ್ಠ ನ್ಯಾಯಾಲಯ ಘೋಷಿಸಿದೆ. ಆದರೆ ದಿಗ್ಬಂಧನದ ಒತ್ತಡದ ಘೇರಾವೊ ಶಾಂತಪ್ರದರ್ಶನವಾಗಲಾರದು.

ಘೇರಾವ್ ಮತ್ತು ಸತ್ಯಾಗ್ರಹಗಳಲ್ಲಿ ಮೂಲಭೂತ ತಾತ್ತ್ವಿಕ ಭೇದವಿದೆ. ವಿವಾದಗಳನ್ನು ಬಗೆಹರಿಸಿಕೊಳ್ಳಲು ಘೇರಾವ್ ಮತ್ತು ಸತ್ಯಾಗ್ರಹ ಎರಡೂ ವಿಧಾನಗಳನ್ನು ಬಳಸಿಕೊಳ್ಳಬಹುದು. ಆದರೆ ಇವೆರಡರ ಸ್ವರೂಪ ಬೇರೆಬೇರೆ. ತಮ್ಮನ್ನು ತೊಂದರೆಗೊಡ್ಡಿಕೊಳ್ಳುವುದರ ಮೂಲಕ ಪರರ ಅಂತಃಕರಣವನ್ನು ಕಲಕುವುದು ಸತ್ಯಾಗ್ರಹದ ಮಾರ್ಗ. ಎದುರಾಳಿಯ ಮನಸ್ಸಿನ ಪರಿವರ್ತನೆ ಅದರ ಉದ್ದೇಶ. ಅದು ಹಲವು ವೇಳೆ ಸ್ವಂತವಾಗಿ ಹೇರಿಕೊಂಡ ಪ್ರಾಯಶ್ಚಿತ್ತ. ಪರರನ್ನು ತೊಂದರೆಗೀಡುಮಾಡಿ ತಮ್ಮ ಉದ್ದೇಶವನ್ನು ಪುರೈಸಿಕೊಳ್ಳುವುದು ಘೇರಾವ್ನ ಉದ್ದೇಶ. ಕುಳಿತು ಸಂಪು ಹೂಡುವ ವಿಧಾನ ಕಾರ್ಮಿಕರಿಗಿರುವ ಉತ್ತಮ ಆಯುಧ ಎಂದು ಹೇಳಲಾಗಿದೆ. ಸಾಮೂಹಿಕ ಚೌಕಾಸಿಯೂ ಕಾರ್ಮಿಕ ಹೋರಾಟದ ಒಂದು ವಿಧಾನ. ಕುಳಿತು ಸಂಪು ಹೂಡುವುದರಲ್ಲಿ ಮತ್ತು ಸಾಮೂಹಿಕ ಚೌಕಸಿಯಲ್ಲಿ ಸಾಮೂಹಿಕ ಒಮ್ಮತ ಮತ್ತು ಸಂಘಟನ ಶಕ್ತಿ ಕಂಡುಬಂದರೂ, ಅವುಗಳಲ್ಲಿ ಯಾರನ್ನಾದರೂ ಪ್ರತಿಬಂಧಿಸುವ ಅಥವಾ ಅವರೋಧಿಸುವ ಪ್ರವೃತ್ತಿ ಇರುವುದಿಲ್ಲ.	(ಎಲ್.ಎಸ್.ಜೆ.)

ಈ ಅಸ್ತ್ರ ಹಿಂಸಾತ್ಮಕವೂ ಅನಿರೀಕ್ಷಿತವೂ ಆದ್ದರಿಂದ ಕೆಲವು ದುಷ್ಪರಿಣಾಮಗಳಿಗೆ ಎಡೆಮಾಡಿಕೊಡುವುದುಂಟು. ಉದಾಹರಣೆಗೆ, 1967ರಲ್ಲಿ ಪಶ್ಚಿಮ ಬಂಗಾಳದಲ್ಲಿ ಘೇರಾವ್ಗಳು ವ್ಯಾಪಕವಾಗಿದ್ದ ಕಾಲದಲ್ಲಿ ಅನೇಕ ಕಾರ್ಖಾನೆಗಳು ಹೊರಗೀಲಿ ಹಾಕಿದುವು. ಈ ಕ್ರಮದಿಂದ ಉತ್ಪಾದನೆಯಲ್ಲಿ ಖೋತಾ ಉಂಟಾಯಿತು. ಪಶ್ಚಿಮ ಬಂಗಾಳದಿಂದ ಹೊರಕ್ಕೆ ಬಂಡವಾಳ ಹರಿಯತೊಡಗಿತು. ಆದಕಾರಣ ಪಶ್ಚಿಮ ಬಂಗಾಳದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಯಿತು. ಆವಶ್ಯಕ ವಸ್ತುಗಳ ಕೊರತೆಯುಂಟಾಗಿ ಗ್ರಾಹಕರಿಗೆ ತೊಂದರೆಯುಂಟಾಯಿತು. ಸರ್ಕಾರಿ ನೌಕರರೂ ಈ ಅಸ್ತ್ರವನ್ನು ಪ್ರಯೋಗಿಸಲು ಪ್ರಾರಂಭಿಸಿದ ಕಾರಣ ರಾಜ್ಯದಲ್ಲಿ ಆಡಳಿತ ಸಡಿಲಗೊಂಡು ಜೀವಕ್ಕೆ ಹಾಗು ಆಸ್ತಿಪಾಸ್ತಿಗೆ ಭದ್ರತೆಯಿಲ್ಲದಂತಾಯಿತು. ಮುಖ್ಯವಾಗಿ ಈ ಅಸ್ತ್ರದ ಪ್ರಯೋಗ ಕಾರ್ಮಿಕ-ಮಾಲೀಕ ಸಂಬಂಧದ ಮೇಲೆ ದುಷ್ಪರಿಣಾಮವನ್ನುಂಟುಮಾಡಿತು. ಹಿಂಸಾತ್ಮಕವೂ ಅನಿರೀಕ್ಷಿತವೂ ಆದಕಾರಣ ಈ ಅಸ್ತ್ರವನ್ನು ಪ್ರಯೋಗಿಸಿದಾಗಲೆಲ್ಲ ಕಾರ್ಮಿಕರಿಗೆ ಮೊದಮೊದಲು ಅನುಕೂಲಗಳೇರ್ಪಟ್ಟುವು. ಆದಕಾರಣ ಕಾರ್ಮಿಕರೂ ಪದೇಪದೇ, ಸಣ್ಣಪುಟ್ಟ ವಿವಾದಗಳನ್ನು ಇತ್ಯರ್ಥಗೊಳಿಸಿಕೊಳ್ಳುವುದಕ್ಕೂ, ಈ ಅಸ್ತ್ರವನ್ನು ಪ್ರಯೋಗಿಸಲು ಹಿಂಜರಿಯಲಿಲ್ಲ. ಹೀಗಾಗಿ ಕಾರ್ಮಿಕ-ಮಾಲೀಕ ಸಂಬಂಧ ಬಿಗಡಾಯಿಸಲು ಪ್ರಾರಂಭಿಸಿತು. ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ, ರಾಷ್ಟ್ರದ ಇತರ ಭಾಗಗಳಲ್ಲಿ ಎಲ್ಲೆಲ್ಲಿ ಈ ಅಸ್ತ್ರ ಪ್ರಯೋಗಿಸಲ್ಪಟ್ಟಿತೊ ಅಲ್ಲೆಲ್ಲ ಮೇಲೆ ಹೇಳಿದ ಪರಿಣಾಮಗಳು ಸ್ವಲ್ಪಮಟ್ಟಿಗೆ ಕಂಡುಬಂದುವು.

ಕಾರ್ಮಿಕರ ರಾಷ್ಟ್ರೀಯ ಸಂಘಟನೆಗಳಲ್ಲೊಂದಾದ ಐ.ಎನ್.ಟಿ.ಯು.ಸಿ ಈ ಅಸ್ತ್ರವನ್ನು ಸ್ಪಷ್ಟವಾಗಿ ಖಂಡಿಸಿದೆ. ಆದರೆ ಇತರ ಸಂಘಟನೆಗಳಾದ ಎ.ಐ.ಟಿಸಿ.ಯು.ಸಿ., ಯು.ಟಿ.ಯು.ಸಿ, ಸಿ.ಐ.ಟಿ- ಇವು ಇಂಥ ಅಸ್ತ್ರದ ಆವಶ್ಯಕತೆಯನ್ನು ಸಮರ್ಥಿಸಿವೆ. ಈ ಅಸ್ತ್ರದ ಆವಶ್ಯಕತೆಯನ್ನು ಸಮರ್ಥಿಸುವ ಕಾರ್ಮಿಕ ಸಂಘಗಳು ಇದು ಒಂದು ಕ್ರಮಬದ್ಧವಾದ ಅಸ್ತ್ರವೆಂದು ತೋರಿಸುವ ದೃಷ್ಟಿಯಿಂದ ಎರಡು ವಾದಗಳನ್ನು ಮುಂದೊಡ್ಡಿದುವು : 1 ವೇತನ ಮಂಡಳಿಗಳ ಶಿಫಾರಸುಗಳನ್ನು ಮಾಲೀಕರು ನೆರವೇರಿಸದೆ ತಮಗೆ ನ್ಯಾಯವಾಗಿ ಸಿಗಬೇಕಾದ ಅನುಕೂಲಗಳನ್ನು ತಡೆಹಿಡಿದಿರುವ ಕಾರಣ ಕಾರ್ಮಿಕರಿಗೆ ಆಶಾಭಂಗವಾಗಿದೆ. ಮಾಲೀಕರ ಇಂಥ ಧೋರಣೆಗಳ ವಿರುದ್ಧ ಹೋರಾಡಬೇಕಾದರೆ ಯಾವುದಾದರೂ ಒಂದು ಬಲಾತ್ಕಾರ ಸ್ವರೂಪದ ಅಸ್ತ್ರವನ್ನೇ ಪ್ರಯೋಗಿಸಬೇಕಾಗುತ್ತದೆ. ಘೇರಾವ್ ಈ ಪರಿಸ್ಥಿತಿಗೆ ಹೊಂದಿಕೆಯಾಗುವ, ಒಂದು ಸೂಕ್ತವಾದ ಅಸ್ತ್ರ. 2. ಭಾರತದ ಕಾರ್ಮಿಕ ಸಂಘಟನೆಗಳು ತೀರ ದುರ್ಬಲವಾದಂಥವು. ಈ ಕಾರಣದಿಂದ ಚೌಕಾಸಿಯ ಸಾಮಥರ್ಯ್ದ ವಿಷಯದಲ್ಲಿ ಮಾಲೀಕ ಮತ್ತು ಕಾರ್ಮಿಕರಲ್ಲಿ ಅಸಮಾನತೆ ಉಂಟಾಗಿದೆ. ಮಾಲೀಕರು ಈ ಅಸಮಾನತೆಯ ದುರುಪಯೋಗ ಪಡೆಯುವುದಕ್ಕೆ ಪ್ರಾರಂಭಿಸಿದ್ದಾರೆ. ಮಾಲೀಕರ ಇಂಥ ದೌರ್ಜನ್ಯದಿಂದ ಕಾರ್ಮಿಕರನ್ನು ಬಿಡುಗಡೆ ಮಾಡಬೇಕಾದರೆ ಸಾಮೂಹಿಕ ಚೌಕಾಸಿಯ ಸಾಮಥರ್ಯ್ದಲ್ಲಿ ಸಮಾನತೆಯನ್ನು ಸ್ಥಾಪಿಸಬೇಕು. ಘೇರಾವ್ ಈ ಧ್ಯೇಯವನ್ನು ಸಾಧಿಸಬಲ್ಲ ಬಲಾತ್ಕಾರ ರೂಪದ ಸಾಧನವಷ್ಟೆ..

ಘೇರಾವ್ಅನ್ನು ಕ್ರಮಬದ್ಧವಾದ ಸಾಧನವೆಂದು ಒಪ್ಪದವರು ಮೇಲಿನ ವಾದಗಳನ್ನು ಖಂಡಿಸಿದ್ದಾರೆ. ಅವರ ಪ್ರಕಾರ ವೇತನಮಂಡಳಿ ಸಾಮಾನ್ಯ ಉದ್ಯಮ ಸಂಸ್ಥೆಯ ಸಾಮಥರ್ಯ್ವನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶಾದ್ಯಂತ ಯಾವುದೇ ಕೈಗಾರಿಕೆಯ ವೇತನಮಟ್ಟವನ್ನು ನಿರ್ಣಯಿಸುವುದರಿಂದ ಕೆಲವು ಉದ್ಯಮಸಂಸ್ಥೆಗಳು ಆ ಮಟ್ಟದ ವೇತನವನ್ನು ಕೊಡಲು ಅಸಮರ್ಥವಾಗುವುದು ಸ್ವಾಭಾವಿಕ. ಆ ಮಟ್ಟದ ವೇತನವನ್ನು ಕೊಡುವ ಸಾಮಥರ್ಯ್ವನ್ನು ವೃದ್ಧಿಗೊಳಿಸುವ ತನಕ ಅಂಥ ಉದ್ಯಮಸಂಸ್ಥೆಗಳಿಗೆ ರಿಯಾಯಿತಿ ತೋರಿಸುವುದು ಸೂಕ್ತ. ಹೀಗೆ ಎಷ್ಟೋ ಬಾರಿ ವೇತನ ಮಂಡಳಿಗಳ ಶಿಫಾರಸುಗಳ ಚೌಕಟ್ಟಿನಲ್ಲಿಯೇ ಕೆಲವು ಉದ್ಯಮ ಸಂಸ್ಥೆಗಳ ಮಾಲೀಕರೂ ಕಾರ್ಮಿಕರೂ ಸಂಧಾನದ ಮೂಲಕ ಒಡಂಬಡಿಕೆಗೆ ಬಂದಿರುವುದೂ ಉಂಟು. ಹೀಗಾಗಿ ಕೆಲವು ಮಾಲೀಕರು ವೇತನಮಂಡಳಿಯ ಶಿಫಾರಸುಗಳನ್ನು ನೆರವೇರಿಸದಿದ್ದರೆ ಅದಕ್ಕೆ ಪ್ರಬಲವಾದ ಆರ್ಥಿಕ ಕಾರಣಗಳುಂಟು. ಅಂಥ ಸಂದರ್ಭದಲ್ಲಿ ಕಾರ್ಮಿಕರೂ ಉದ್ಯಮದ ಸಮಸ್ಯೆಗಳ ಬಗ್ಗೆ ಸಹಾನುಭೂತಿ ತೋರಿಸಿ ಮಾಲೀಕರೊಂದಿಗೆ ಸಂಧಾನ ಮಾಡಿಕೊಂಡು ಒಡಂಬಡಿಕೆಗೆ ಬರುವುದು ಸೂಕ್ತವೇ ಹೊರತು, ಬಲಾತ್ಕಾರದ ಕ್ರಮಗಳನ್ನು ಅನುಸರಿಸುವುದು ಸಾಧುವಲ್ಲ.

ಘೇರಾವ್ ಚೌಕಾಸಿ ಸಾಮಥರ್ಯ್ಗಳನ್ನು ಸಮಾನಗೊಳಿಸುವ ಸರ್ಮಪಕವಾದ ಸಾಧನವಲ್ಲವೆಂಬುದು ಇವರ ಅಭಿಪ್ರಾಯ. ಚೌಕಾಸಿಯ ಸನ್ನಿವೇಶದಲ್ಲಿ ಎರಡೂ ಪಕ್ಷಗಳ ಸಂಧಾನ ಕುಸಿದರೆ ಅದರಿಂದ ತಮಗೆ ನಷ್ಟವುಂಟಾಗುತ್ತದೆ ಎಂಬ ಅರಿವಿನಿಂದ ಅವು ಸಂಧಾನ ಕೈಗೊಳ್ಳುತ್ತವೆ. ಆದ್ದರಿಂದ ಚೌಕಾಸಿಯ ಕಾರ್ಯಗತಿಯಲ್ಲಿ ಎರಡೂ ಪಕ್ಷದವರಿಗೂ ಹಣಕಾಸಿನ ನಷ್ಟಸಂಭವವಿರುತ್ತದೆ. ಸಂಧಾನ ಕುಸಿದರೆ ಮುಷ್ಕರ ಸಂಭವಿಸುತ್ತದೆ. ಉತ್ಪಾದನೆ ನಿಂತು ಮಾಲೀಕರಿಗೆ ನಷ್ಟವಾಗುತ್ತದೆ. ಅವರು ತಮ್ಮ ಸರಕಿಗೆ ಮಾರುಕಟ್ಟೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಮುಷ್ಕರದಿಂದ ಕಾರ್ಮಿಕರಿಗೆ ವೇತನ ಹಾಗೂ ಉದ್ಯೋಗ ನಷ್ಟವುಂಟಾಗುತ್ತದೆ. ಆದರೆ ಮುಷ್ಕರ ಹೂಡುವುದಕ್ಕೆ ಮೊದಲು ಎಲ್ಲ ಸಾಧಕಬಾಧಕಗಳನ್ನೂ ಕೂಲಂಕಷವಾಗಿ ವಿಚಾರಮಾಡಿ ಅನಂತರವೇ ಯಾವುದೇ ನಿರ್ಣಯಕ್ಕೆ ಬರಲಾಗುತ್ತದೆ. ಉದಾಹರಣೆಗೆ, ಉದ್ಯಮಿಯಾದವನು ಕಾರ್ಮಿಕರ ಬೇಡಿಕೆಯನ್ನು ಪುರೈಸುವುದಾಗಿ ಒಪ್ಪಿಕೊಳ್ಳುವುದರಿಂದ ಸಂಭವಿಸುವ ನಷ್ಟವನ್ನು ಅದಕ್ಕೆ ಒಪ್ಪಿಕೊಳ್ಳದೆ ಮುಷ್ಕರಕ್ಕೆ ಎಡೆಕೊಟ್ಟರೆ ಆಗುವ ನಷ್ಟವನ್ನೂ ಹೋಲಿಸಿ ನೋಡುತ್ತಾನೆ. ಇವೆರಡರಲ್ಲಿ ಯಾವ ಮಾರ್ಗ ಅನುಸರಿಸುವುದರಿಂದ ನಷ್ಟ ಕಡಿಮೆಯೋ ಆ ಮಾರ್ಗವನ್ನನುಸರಿಸುತ್ತಾನೆ. ಕಾರ್ಮಿಕರೂ ಮುಷ್ಕರದಿಂದಾಗುವ ನಷ್ಟವನ್ನು ಮುಷ್ಕರ ಮಾಡದೆ ಮಾಲೀಕರ ಷರತ್ತುಗಳನ್ನು ಒಪ್ಪಿಕೊಳ್ಳುವುದರಿಂದ ಕಳೆದುಕೊಳ್ಳುವ ಅನುಕೂಲಗಳೊಡನೆ ಹೋಲಿಸಿ ನೋಡುತ್ತಾರೆ. ಈ ಅಂಶಗಳ ವಿವೇಚನೆಯ ಆಧಾರದ ಮೇಲೆ ಎರಡೂ ಪಕ್ಷಗಳ ನಡುವೆ ಆಗುವ ತೀರ್ಮಾನ ಪ್ರಸ್ತುತ ಪರಿಸ್ಥಿತಿಯಲ್ಲಿ ಇಬ್ಬರ ದೃಷ್ಟಿಯಿಂದಲೂ ಕ್ಷೇಮಕರವಾಗಿರುತ್ತದೆ. ಆದರೆ ಘೇರಾವ್ದಲ್ಲಿಯ ಸ್ಥಿತಿಯೇ ಬೇರೆ. ಇಲ್ಲಿ ಕಾರ್ಮಿಕರು ಮಾಲೀಕನ್ನು ಅನಿರೀಕ್ಷಿತವಾಗಿ ಸುತ್ತುವರಿಯುವುದರಿಂದ ಆತನಿಗೆ ಬೇಡಿಕೆಗಳ ನ್ಯಾಯಬದ್ಧತೆಯ ವಿಚಾರ ಮಾಡಲು ಅವಕಾಶವಿರುವುದಿಲ್ಲ. ಎರಡನೆಯದಾಗಿ, ಇಲ್ಲಿ ನಷ್ಟಸಂಭವವನ್ನು ಎದುರಿಸಬೇಕಾದವನು ಮಾಲೀಕನೊಬ್ಬನೇ ಹೊರತು ಕಾರ್ಮಿಕರಲ್ಲ. ಏಕೆಂದರೆ ಘೇರಾವೊ ಮುಷ್ಕರವಲ್ಲವಾದ್ದರಿಂದ ಕಾರ್ಮಿಕರು ವೇತನವನ್ನು ಕಳೆದುಕೊಳ್ಳುವ ಪ್ರಮೇಯವಿಲ್ಲ. ಅಲ್ಲದೆ ಮಾಲೀಕ ಎದುರಿಸಬೇಕಾದ ನಷ್ಟಸಂಭವ ಹಣಕಾಸಿನದೊಂದೇ ಅಲ್ಲ, ಅದು ವೈಯಕ್ತಿಕ ಸೌಕರ್ಯ. ಒಂದೊಂದು ವೇಳೆ ಜೀವಕ್ಕೆ ಅಪಾಯವಿರುವುದುಂಟು. ಘೇರಾವ್ಅನ್ನು ಈ ದೃಷ್ಟಿಯಿಂದ ನೋಡಿದ್ದೇ ಆದರೆ ಅದು ಮಾಲೀಕರಲ್ಲೂ ಕಾರ್ಮಿಕರಲ್ಲೂ ಚೌಕಾಸಿ ಸಾಮಥರ್ಯ್ವನ್ನು ಸಮಗೊಳಿಸುವಂಥ ಸರಿಯಾದ ಸಾಧನವಲ್ಲ ಎಂದು ವಾದಿಸಲಾಗಿದೆ.	(ಎ.ಬಿ.ಎ.)

ಕಾರ್ಮಿಕರ ಆಶೋತ್ತರಗಳನ್ನು ಈಡೇರಿಸುವಲ್ಲಿ ಮತ್ತು ಸೂಕ್ತ ಪರಿಹಾರವನ್ನು ಒದಗಿಸುವಲ್ಲಿ ಆಚರಣೆಯಲ್ಲಿರುವ ಕಾರ್ಮಿಕ ಕಾನೂನುಗಳು ಅಸಮರ್ಥ ಮತ್ತು ಅಪರಿಪುರ್ಣವಾಗಿರುವುದು ಘೇರಾವ್ಗಳಿಗೆ ಕಾರಣವಾಗಿದೆ ಎಂಬುದು ಒಂದು ವಾದ. ಕಾರ್ಮಿಕರಲ್ಲಿ ತಾಳ್ಮೆ, ನ್ಯಾಯ, ನಿಷ್ಠೆ ಮತ್ತು ಶಿಸ್ತುಪಾಲನೆಗಳ ಅಭಾವ ಘೇರಾವ್ ವಿಧಾನಕ್ಕೆ ಅವಕಾಶವಿತ್ತಿದೆ ಎನ್ನುವುದು ಮತ್ತೊಂದು ವಾದ. ಕಾರಣ ಯಾವುದೇ ಆಗಿದ್ದರೂ ಘೇರಾವ್ನ ವಿಧಾನವನ್ನು ಅನುಸರಿಸುವುದು ಕಾನೂನುಬಾಹಿರವಾಗಿದೆ. ಘೇರಾವ್ನ ಪರಿಣಾಮವಾಗಿ ರೂಪುಗೊಂಡ ಒಪ್ಪಂದವೂ ನ್ಯಾಯಸಮ್ಮತವಲ್ಲ. ಅಲ್ಲದೆ ಘೇರಾವ್ ಮೂಲಕ ಮಾಡಿಕೊಳ್ಳಲಾಗುವ ಒಪ್ಪಂದ ಕಾರ್ಮಿಕ ಮತ್ತು ವ್ಯವಸ್ಥಾಪಕ ವರ್ಗಗಳ ಪರಸ್ಪರ ಸಮ್ಮತಿಯ ಒಪ್ಪಂದವಾಗಲಾರದು ಮತ್ತು ಈ ರೀತಿಯ ಬಲವಂತದ ಒಪ್ಪಂದ ಉಭಯವರ್ಗಗಳ ಮಾನಸಿಕ ಸಂಬಂಧದಲ್ಲಿ ಆತಂಕವನ್ನುಂಟುಮಾಡುತ್ತದೆ.

ಭಾರತದ ಕಾರ್ಮಿಕ ಕಾನೂನುಗಳು ಘೇರಾವ್ಗಳಿಗೆ ಅವಕಾಶ ನೀಡುತ್ತವೆಯೇ ಎನ್ನುವುದು ಒಂದು ಪ್ರಶ್ನೆ. ಅಪರಾಧಗಳನ್ನು ಮಾಡಿದರೆ ಮತ್ತು ಅಪರಾಧಗಳನ್ನು ಮಾಡಲು ಒಪ್ಪಂದ ಮಾಡಿಕೊಂಡಿದ್ದರೆ ತತ್ಸಂದರ್ಭದಲ್ಲಿ ಸಂಬಂಧಪಟ್ಟ ಕಾರ್ಮಿಕರು ಮತ್ತು ಕಾರ್ಮಿಕ ಸಂಘದ ಸದಸ್ಯರು ಶಿಕ್ಷೆಗೆ ಮತ್ತು ಕಾನೂನು ಕ್ರಮಕ್ಕೆ ಗುರಿಯಾಗುತ್ತಾರೆ ಎಂಬುದಾಗಿ ಕಾರ್ಮಿಕ ಸಂಘಗಳ ಅಧಿನಿಯಮದ 17ನೆಯ ಮತ್ತು 18ನೆಯ ಕಲಮುಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ವಿಧಿ ಉಲ್ಲಂಘಿಸಿ ಸಭೆ ಸೇರಿದ ಅಪರಾಧ, ಯಾರೊಬ್ಬರನ್ನು ಪ್ರತಿಬಂಧಿಸಿದ ಅಥವಾ ಅವರೋಧಿಸಿದ ಅಪರಾಧ, ಆಪರಾಧಿಕ ಬಲಪ್ರಯೋಗ, ಮೇಲೆ ಬೀಳುವುದು, ಕುಚೇಷ್ಟೆ, ಅತಿಕ್ರಮಣಾಪರಾಧ, ಆಪರಾಧಿಕ ಭಯೋತ್ಪಾದನೆ ಮುಂತಾದ ವಿವಿಧ ಅಪರಾಧಗಳಾಗಿ ಘೇರಾವೊ ಪರಿಣಮಿಸಬಹುದು. ಭಾರತದ ದಂಡಸಂಹಿತೆಯ 339, 340, 341, 342 ಮುಂತಾದ ಕಲಮುಗಳಲ್ಲಿ ಯಾವೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅವರೋಧಿಸುವುದು ಮತ್ತು ಪ್ರತಿಬಂಧಿಸುವುದನ್ನು ಅಪರಾಧಗಳೆಂದು ಪರಿಗಣಿಸಲು ಮತ್ತು ಆ ಬಗ್ಗೆ ಸೂಕ್ತ ದಂಡಗಳನ್ನು ವಿಧಿಸಲು ಅವಕಾಶವಿದೆ. ಹಾಗೆ ನೋಡಿದರೆ ಬಲಪ್ರಯೋಗವಾಗಲೇಬೇಕಿಲ್ಲ. ಬಲಪ್ರಯೋಗ ನಿಶ್ಚಿತವೆಂದು ಸೂಚಿಸುವ ಭಯವೂ ದಂಡದ ಹೊಣೆಗಾರಿಕೆಗೆ ಕಾರಣವಾಗುತ್ತದೆ. 351 ಮತ್ತು 352ನೆಯ ಕಲಮುಗಳೂ ಈ ಅಭಿಪ್ರಾಯವನ್ನು ಬಲಪಡಿಸುತ್ತವೆ. 503ನೆಯ ಕಲಮಿನಲ್ಲಿ ಆಪರಾಧಿಕ ಭಯೋತ್ಪಾದನೆಯನ್ನು ಕುರಿತು ಹೇಳಲಾಗಿದೆ. ಈ ಅಪರಾಧಕ್ಕೆ 506ನೆಯ ಕಲಮಿನನ್ವಯ ಎರಡು ವರ್ಷಗಳವರೆಗಿನ ಶಿಕ್ಷೆ ಇಲ್ಲವೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಘೇರಾವ್ ಅಪರಾಧದ ಸ್ವರೂಪ ತಾಳುವುದನ್ನು ತಡೆಗಟ್ಟಲು ಮತ್ತು ಅದನ್ನು ಹತೋಟಿಗೆ ತರಲು ದಂಡಪ್ರಕ್ರಿಯಾಸಂಹಿತೆಯ ಉಪಬಂಧಗಳನ್ವಯ ಕ್ರಮ ಕೈಗೊಳ್ಳಲು ಅವಕಾಶವಿದೆ. ಯಾವ ಕೋರ್ಟಿನ ಆಜ್ಞೆಯೂ ಇಲ್ಲದೆ ಪೊಲೀಸರು ಈ ಸಂಬಂಧದಲ್ಲಿ ತನಿಖೆ ನಡೆಸಬಹುದು. ಅಪರಾಧಕ್ಕೆ ಕಾರಣರಾದವರನ್ನು ಕೂಡಲೆ ದಸ್ತಗಿರಿ ಮಾಡಬಹುದು ಮತ್ತು ಅವರನ್ನು ನ್ಯಾಯಾಲಯದ ವಿಚಾರಣೆಗೆ ಗುರಿ ಮಾಡಬಹುದು. ಆದರೆ ಪೊಲೀಸರು ಈ ಕ್ರಮ ಕೈಗೊಳ್ಳದಿದ್ದುದೂ ಉಂಟು. 1967ರಲ್ಲಿ ಪಶ್ಚಿಮ ಬಂಗಾಳ ಸರ್ಕಾರ ತನ್ನ ಪುರ್ವ ಅನುಮತಿ ಇಲ್ಲದೆ ಘೇರಾವ್ಗಳನ್ನು ತಡೆಯಬಹುದೆಂದು ಪೋಲೀಸರಿಗೆ ಆದೇಶ ಹೊರಡಿಸಿತ್ತು. ಉಪಟಳ ಮತ್ತು ಪೋಲೀಸರ ಧೋರಣೆಯ ಕಾರಣದಿಂದ ಕೊಲ್ಕತದ ಉಚ್ಚ ನ್ಯಾಯಾಲಯದ ಮುಂದೆ ಅನೇಕ ರಿಟ್ ಅರ್ಜಿಗಳು ಬಂದವು. ಸಂವಿಧಾನದ ಉಪಬಂಧಗಳು, ಕಾರ್ಮಿಕ ಕಾನೂನುಗಳು, ದಂಡಸಂಹಿತೆ, ದಂಡಪ್ರಕ್ರಿಯಾ ಸಂಹಿತೆ ಮುಂತಾದ, ಇದಕ್ಕೆ ಸಂಬಂಧಪಟ್ಟ, ಎಲ್ಲ ಕಾನೂನುಗಳನ್ನೂ ಉಚ್ಚ ನ್ಯಾಯಲಯ ವಿವೇಚಿಸಿ, ಘೇರಾವೊ ಸಂವಿಧಾನಕ್ಕೆ ವಿರೋಧವೂ ರಾಷ್ಟ್ರದ ಕಾನೂನಿನನ್ವಯ ಅಪರಾಧವೂ ಆಗಿದೆ ಎಂದು ತೀರ್ಪಿತ್ತಿತು.

ಘೇರಾವ್ಗಳ ಬಗ್ಗೆ ಪೋಲೀಸರು ಕ್ರಮ ತೆಗೆದುಕೊಳ್ಳದಿರುವುದು ಸಾಮಾಜಿಕ ಸುವ್ಯವಸ್ಥೆಯ ದೃಷ್ಟಿಯಿಂದ ಒಳ್ಳೆಯದಲ್ಲವೆಂದು ವಾದಿಸಲಾಗಿದೆ. ಅವರ ಕರ್ತವ್ಯಕ್ಕೆ ಚ್ಯುತಿ ಬಂದರೆ ಕಾನೂನಿನನ್ವಯ ಅವರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಾರ್ವಜನಿಕ ಅಂತಃಸಾಕ್ಷಿ ಮತ್ತು ನ್ಯಾಯನಿಷ್ಠೆಗಳ ಅಡಿಪಾಯವುಳ್ಳ ಭಾರತೀಯ ನ್ಯಾಯಾಲಯಗಳು ಈ ಬಗ್ಗೆ ಪೊಲೀಸ್ ಖಾತೆಯನ್ನು ಎಚ್ಚರಿಸುವುದರ ಜೊತೆಗೆ, ಘೇರಾವ್ನಿಂದ ತೊಂದರೆಗೆ ಈಡಾದವರನ್ನು ಮುಕ್ತಗೊಳಿಸುವಲ್ಲಿ ಸಫಲವಾಗಿವೆ. ದಂಡಪ್ರಕ್ರಿಯಾ ಸಂಹಿತೆಯ 100, 107, 117, 144 ಮತ್ತು 491ನೆಯ ಕಲಮುಗಳು ಅಪರಾಧಗಳ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಮತ್ತು ಅವುಗಳನ್ನು ತಡೆಯಲು ಸಹಾಯಕವಾಗುತ್ತವೆ. ಇಂಗ್ಲೆಂಡ್, ಅಮೆರಿಕ, ಜರ್ಮನಿ, ಇಸ್ರೇಲ್ ಮುಂತಾದ ಅನೇಕ ದೇಶಗಳಲ್ಲಿ ಭಾರತದ ದಂಡಸಂಹಿತೆ ಮತ್ತು ದಂಡಪ್ರಕ್ರಿಯಾ ಸಂಹಿತೆಗಳಲ್ಲಿ ಹೇಳಲಾದಂಥ, ಕಾನೂನಿನ ಅನೇಕ ನಿಯಮಗಳು ಆಚರಣೆಯಲ್ಲಿವೆ. ಆದ್ದರಿಂದ ಅನೇಕ ದೇಶಗಳಲ್ಲಿ ಘೇರಾವ್ ಅಪರಾಧವೆಂದು ಪರಿಗಣಿಸಲು ಸಾಧ್ಯವಿದೆ.
ಘೇರಾವ್ ರೀತಿಯ ಕಾರ್ಮಿಕ ಆಂದೋಲನ ವಿಶ್ವದ ಇತರ ರಾಷ್ಟ್ರಗಳಲ್ಲಿ ಹೆಚ್ಚಾಗಿ ನಡೆದಿಲ್ಲವೆನ್ನಬಹುದಾಗಿದ್ದರೂ, ಒಂದನೆಯ ಮಹಾಯುದ್ಧಕ್ಕೆ ಮುಂಚೆ ಬ್ರಿಟನ್ನಿನಲ್ಲಿ ಮತ್ತು ಎರಡನೆಯ ಮಹಾಯುದ್ಧಕ್ಕೆ ಮುಂಚೆ ಜಪಾನಿನಲ್ಲಿ ಇಂಥ ಘಟನೆಗಳು ನಡೆದಿವೆ. ಇತ್ತೀಚೆಗೆ ವೆಸ್ಟ್ ಇಂಡೀಸ್, ಗಯಾನ ಮುಂತಾದೆಡೆಗಳಲ್ಲಿ ಇಂಥ ಪ್ರಸಂಗಗಳು ಜರುಗಿವೆ. ನ್ಯಾಯದ ಶ್ರೇಷ್ಠತೆಯನ್ನು ಎತ್ತಿಹಿಡಿಯುವ, ಮತ್ತು ಪ್ರಜಾತಂತ್ರಸ್ವರೂಪದ ಆಡಳಿತವಿರುವ ಎಲ್ಲ ದೇಶಗಳೂ ಘೇರಾವ್ಅನ್ನು ಖಂಡಿಸುವುದರ ಜೊತೆಗೆ ಅಲ್ಲಿಯ ದಿವಾಣಿ ಮತ್ತು ದಂಡಸಂಹಿತೆಗಳನ್ವಯ ಅದನ್ನು ನ್ಯಾಯಬಾಹಿರ ಮತ್ತು ಅಪರಾಧ ಎಂದು ಪರಿಗಣಿಸುತ್ತವೆ.

ಅನೇಕ ದೇಶಗಳಲ್ಲಿಯ ಕಾನೂನುಗಳಲ್ಲಿ ಕಾರ್ಮಿಕರ ವಿವಾದಗಳನ್ನು ಇತ್ಯರ್ಥಗೊಳಿಸಲು ಸಂಧಾನ ಮತ್ತು ನ್ಯಾಯನಿರ್ಣಯಗಳಂಥ ವ್ಯವಸ್ಥೆ ಮಾಡಲಾಗಿದೆ. ಘೇರಾವ್ ಈ ಎರಡೂ ರೀತಿಯ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವುದಿಲ್ಲ. ಅಲ್ಲದೆ ನ್ಯಾಯ, ಕಾರ್ಮಿಕ ಸಮಾಜದ ಪ್ರಗತಿ ಇವೆರಡಕ್ಕೂ ಘೇರಾವ್ ಉತ್ತಮ ಸಾಧನವಾಗಲಾರದು.
ಹಾಗಾದರೆ ಇನ್ನು ಮುಂದೆ ಘೇರಾವ್ಗಳು ಇಲ್ಲವಾಗಬಹುದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಕಾರ್ಮಿಕ ಸಂಘಟನೆ, ಕಾರ್ಮಿಕ ವಿವಾದಗಳ ಇತ್ಯರ್ಥದ ವ್ಯವಸ್ಥೆಯಲ್ಲಿ ಸುಧಾರಣೆ, ವ್ಯವಸ್ಥಾಪಕ ಮತ್ತು ಕಾರ್ಮಿಕರಲ್ಲಿಯ ಉತ್ತಮ ಸಂಬಂಧ-ಇವು ಘೇರಾವ್ಗಳ ಆವಶ್ಯಕತೆಯನ್ನು ತೊಡೆದುಹಾಕಬಹುದು. ಸಾಮಾಜಿಕ ಸುವ್ಯವಸ್ಥೆ ಮತ್ತು ರಾಜಕೀಯ ಧೋರಣೆಗಳಲ್ಲಿಯ ಪರಿವರ್ತನೆಯಿಂದಾಗಿ ಇತರ ರಂಗಗಳಲ್ಲೂ ಘೇರಾವ್ಗಳು ಇಲ್ಲವಾಗಬಹುದು.	(ಎಲ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ